ಶಿಲಾಹಾರರು
- 	ಕರ್ನಾಟಕದ ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಳುಕ್ಯ ಅರಸರ ಮಾಂಡಲಿಕರಾಗಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರಗ ಳಲ್ಲಿ ಕೆಲವು ಶತಮಾನಗಳ ಕಾಲ ರಾಜ್ಯವಾಳಿದವರು. ಈ ಮನೆತನದ ಹಲವಾರು ಶಾಖೆಗಳು ಕಾಣಸಿಕೊಂಡಿವೆ. ದಕ್ಷಿಣ ಕೊಂಕಣದಲ್ಲಿ ಆಳಿದ ಶಾಖೆ ಸು. 770ರಿಂದ 1020ರವರೆಗೆ ಅಧಿಕಾರದಲ್ಲಿತ್ತು. ಉತ್ತರ ಕೊಂಕಣದ ಶಾಖೆಗೆ ಸೇರಿದ ಮಾಂಡಲಿಕರು ಸು. 800ರಲ್ಲಿ ತಲೆಎತ್ತಿ ಸು. 1240ರ ವರೆಗೆ ಪ್ರಬಲರಾಗಿದ್ದರು. ಈಗಿನ ಮಹಾರಾಷ್ಟ್ರದ ಸತಾರ, ಕೊಲ್ಲಾಪುರ ಜಿಲ್ಲೆಗಳು ಹಾಗೂ ಬೆಳಗಾಂವಿ ಜಿಲ್ಲೆಯ ಪ್ರದೇಶಗಳಲ್ಲಿ ಇವರ ಇನ್ನೊಂದು ಶಾಖೆ ಆಳುತ್ತಿತ್ತು. ಅಲ್ಲದೆ, ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯಲ್ಲಿ ಈ ಮನೆತನದ ನಾಲ್ಕನೆಯ ಶಾಖೆಯೊಂದಿತ್ತು. ಜೊತೆಗೆ ನಿರ್ದಿಷ್ಟವಾಗಿ ಈ ಯಾವುದೇ ಶಾಖೆಗಳಿಗೂ ಸೇರದ ಆದರೆ ಶಿಲಾಹಾರ ಮನೆತನದವರಾದ ಇನ್ನು ಹಲವು ಮಾಂಡಲಿಕರ ಹೆಸರುಗಳೂ ಶಾಸನಗಳಿಂದ ಲಭಿಸಿವೆ. ಈ ಬೇರೆ ಬೇರೆ ಶಾಖೆಗಳ ನಡುವಣ ಸಂಬಂಧಗಳು ಸ್ಪಷ್ಟವಾಗಿ ತಿಳಿಯದು. ಆದರೆ ಇವರೆಲ್ಲ ಜೀಮೂತ ವಾಹನ ಕುಲಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಜೀಮೂತವಾಹನ ಒಬ್ಬ ವಿದ್ಯಾಧರ ಪ್ರಮುಖ. ಶಂಖಚೂಡನೆಂಬ ಉರಗಾಧಿಪತಿಯನ್ನು ಗರುಡನಿಂದ ರಕ್ಷಿಸಲೆಂದು ಈತ ತನ್ನ ದೇಹವನ್ನೇ ಗರುಡನಿಗೆ ನೀಡಲು ಮುಂದಾದನೆಂಬುದು ಈತನಿಗೆ ಸಂಬಂಧಿಸಿದ ಕಥೆ. ಇದನ್ನು ದೃಢಪಡಿಸುವಂತೆ ಈ ಮನೆತನದವರು ಶಿಲಾಹಾರ (ಶಿಲೆಯ ಮೇಲಿನ ಆಹಾರ) ಎಂಬ ಹೆಸರನ್ನು ಧರಿಸಿದ್ದಾರೆ. ಈ ಮನೆತನದ ಎರಡು ಶಾಖೆಗಳವರು ತಾವು ತಗರಪುರಾಧೀಶ್ವರರೆಂದೂ ಗರುಡ ತಮ್ಮ ಲಾಂಛನವೆಂದೂ ಹೇಳಿಕೊಂಡಿದ್ದಾರೆ. ತಗರ ಎಂಬುದು ಈಗಿನ ಮಹಾರಾಷ್ಟ್ರದಲ್ಲಿರುವ ತೇರ್. ಶಿಲಾಹಾರ ಎಂಬ ಹೆಸರು ಶಾಸನಗಳಲ್ಲಿ ಶಿಲಾರ, ಶೀಳಾರ, ಶಿಯಳಾರ, ಸಿಲಾರ ಎಂಬೆಲ್ಲ ರೂಪುಗಳಲ್ಲಿ ಕಾಣಿಸಿಕೊಂಡಿದೆ.
												(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ